ಪರಿಚಯ

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಪ್ರಧಾನವಾಗಿ ನಾಲ್ಕು ಅಂಗಗಳನ್ನು ಒಳಗೊಂಡಿದೆ – ಬೋಧನಾಂಗ, ಸಂಶೋಧನಾಂಗ, ಪ್ರಸಾರಂಗ ಮತ್ತು ಆಡಳಿತಾ೦ಗ. ಇವುಗಳ ಮೂಲಕ ವಿಶ್ವವಿದ್ಯಾಲಯದ ಕ್ರಿಯಾಶಕ್ತಿಯು ಹೆಚ್ಚಿಸುತ್ತದೆ. ಈ ಅಂಗಗಳ ಮೂಲಕ ಕರ್ನಾಟಕಕ್ಕೆ ಸಂಬಂಧಿಸಿದ ಎಲ್ಲ ಸಂಸ್ಕೃತಕಾರ್ಯಗಳನ್ನು ನಿರ್ವಹಿಸುವುದು ಈ ವಿಶ್ವವಿದ್ಯಾಲಯದ ಉದ್ದೇಶ.
ಬೋಧನೆ ಮತ್ತು ಸಂಶೋಧನೆ ಇವೆರಡೂ ವಿಶ್ವವಿದ್ಯಾಲಯದ ಉದ್ದೇಶ. ಬೋಧನೆಯು ಉನ್ನತ ಸ್ತರದ ಶೈಕ್ಷಣಿಕ ಪ್ರಕ್ರಿಯೆಯಾದರೆ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಸ್ತರದವರೆಗೂ ಶೈಕ್ಷಣಿಕ ಪ್ರಗತಿಯು ಕ್ರಮಶಃ ಸಾಗಬೇಕು. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವನ್ನು ಆರಂಭಿಸಿದೆ. ನಿರ್ದೇಶನಾಲಯದ ಮೂಲಕ ಪ್ರಥಮಾ-ಕಾವ್ಯ-ಸಾಹಿತ್ಯ ಪಾಠ್ಯಕ್ರಮಗಳ ಪರೀಕ್ಷೆ ಮುಂತಾದ ಶೈಕ್ಷಣಿಕಪ್ರಕ್ರಿಯೆಗಳನ್ನು ನಿರ್ವಹಿಸಲು ಬೇಕಾದ ಪ್ರಾಥಮಿಕಪ್ರಕ್ರಿಯೆಗಳೂ, ಪೂರಕಪ್ರಕ್ರಿಯೆಗಳೂ ನಡೆಸಲ್ಪಡುತ್ತವೆ. ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಆಡಳಿತಮಂಡಳಿ – ಈ ಮೂರರ ಸಮನ್ವಯವನ್ನು ಸಾಧಿಸುವುದು ಸಂಸ್ಕೃತ ಶಿಕ್ಷಣ ನಿರ್ದೇಶನಾಲಯದ ಉದ್ದೇಶ.

ಕರ್ನಾಟಕರಾಜ್ಯದ ಸಂಸ್ಕೃತ ಶಿಕ್ಷಣ ವ್ಯವಸ್ಥೆಗೆ ಹೊಸ ದಾರಿಯನ್ನು ಕಲ್ಪಿಸಲೆಂದೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ಸ್ಥಾಪಿತವಾಗಿದೆ. ಅದರ ಮೂಲಕ ಸ್ನಾತಕ-ಸ್ನಾತಕೋತ್ತರ ಅಧ್ಯಯನ-ಸಂಶೋಧನೆಗಳನ್ನು ನಡೆಸಲು ಯೋಗ್ಯವಾದ ನೂತನ ವ್ಯವಸ್ಥೆಯು ನಿರ್ಮಿಸಲ್ಪಟ್ಟಿದೆ. ಇದರೊಡನೆ ಪದವೀಪೂರ್ವಸಂಸ್ಕೃತ ಶಿಕ್ಷಣವನ್ನು ನೀಡುತ್ತಿರುವ ಪಾಠಶಾಲೆಗಳ ಆಡಳಿತ ಮತ್ತು ಶೈಕ್ಷಣಿಕ ವ್ಯವಸ್ಥೆಯ ನಿರ್ವಹಣೆಗಾಗಿ ವಿಶ್ವವಿದ್ಯಾಲಯಕ್ಕೆ ಅಧೀನವಾಗಿ ಸಂಸ್ಕೃತ ಶಿಕ್ಷಣ ನಿರ್ದೇಶನಾಲಯವು ಸ್ಥಾಪಿಸಲ್ಪಟ್ಟಿದೆ.

೧. ಆಡಳಿತ ಸೌಕರ್ಯದ ದೃಷ್ಟಿಯಿಂದ ರಾಜ್ಯದಲ್ಲಿರುವ ಸಂಸ್ಕೃತಪಾಠಶಾಲೆಗಳ ನಿರ್ವಹಣೆಗಾಗಿ ಬೆಂಗಳೂರು, ಮೈಸೂರು, ಚಿತ್ರದುರ್ಗ, ಧಾರವಾಡ ಎಂಬ ನಾಲ್ಕು ವಲಯಗಳನ್ನು ನಿರ್ಮಿಸಲಾಗಿದೆ. ಈ ವಲಯಗಳಲ್ಲಿ ಪಾಠಶಾಲೆಗಳನ್ನು ವಿಂಗಡಿಸಿ ಪ್ರತಿಯೊಂದು ಪಾಠಶಾಲೆಗೂ ಪ್ರತ್ಯೇಕವಾದ ಸಂಕೇತಸಂಖ್ಯೆಯನ್ನು ನೀಡಲಾಗಿದೆ.

೨. ಪ್ರಥಮಾ-ಕಾವ್ಯ-ಸಾಹಿತ್ಯ ಪರೀಕ್ಷೆಗಳನ್ನು ನಡೆಸುತ್ತಿರುವ ಪಾಠಶಾಲೆಗಳ ಮಾನ್ಯತೆಯನ್ನು ನವೀಕರಿಸಲು ಪ್ರಯತ್ನ ನಡೆಯುತ್ತಿದೆ.

೩. ಪಾಠಶಾಲೆಗಳಲ್ಲಿ ಬೋಧಿಸುತ್ತಿರುವ ಶಿಕ್ಷಕರಿಗಾಗಿ ಮೂರುದಿನಗಳ ಪುನಶ್ಚೇತನಶಿಬಿರಗಳನ್ನು ನಡೆಸಲಾಗುತ್ತಿದೆ.

೪. ಕಳೆದ ವರ್ಷ ಪ್ರಥಮಾ-ಕಾವ್ಯ-ಸಾಹಿತ್ಯ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯನ್ನು ಪಡೆದಂತಹ ಪಾಠಶಾಲೆಗಳಿಗೆ ವಲಯವಾಗಿ ಪುರಸ್ಕಾರಗಳನ್ನು ನೀಡಲಾಗಿದೆ.

೫. ಪ್ರಥಮಾ-ಕಾವ್ಯ-ಸಾಹಿತ್ಯ ವಿದ್ಯಾರ್ಥಿಗಳಿಗಾಗಿ ವಲಯಮಟ್ಟದಿಂದ ರಾಜ್ಯಮಟ್ಟದವರೆಗೆ ಸ್ಪರ್ಧೆಗಳನ್ನು ನಡೆಸಿ ಪ್ರತಿಭಾಪುರಸ್ಕಾರಗಳನ್ನು ವಿತರಿಸಲಾಗುತ್ತಿದೆ.

೬. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿವೇತನವನ್ನು ನೀಡಲಾಗುತ್ತಿದೆ.

೭. ಶ್ರಾವಣಮಾಸವನ್ನು ಸಂಸ್ಕೃತಮಾಸವೆಂದು ಘೋಷಿಸಿ ಸಂಸ್ಕೃತೋತ್ಸವವನ್ನು ಆಚರಿಸಲಾಗುತ್ತಿದೆ.

೮. ಹೊಸ ಪಾಠ್ಯಕ್ರಮವನ್ನು ಶೀಘ್ರದಲ್ಲೇ ಸಂಯೋಜಿಸಲಾಗುವುದು.

Comments are closed.